Thursday, January 18, 2018

ಹಳ್ಳಿಕಟ್ಟೆ

ಹಳ್ಳಿಕಟ್ಟೆ 
              (ಕಟ್ಟೆವಾಲಗಳು, ಗಂಜಿವಾಲಗಳು)       



ಬಿಳಿ ಅಂಗಿ, ಬಿಳಿ ಪಂಚೆ.
ಅದರ ಜೊತೆಗೆ ಖಡಕ್ ಗಂಜಿ,
ಖಡಕ್ ಖಡಕ್ ಸುದ್ದಿಯೊಂದಿಗೆ,
ಮಾತಾಡುತ ಕಟ್ಟೆಗೆ ಕುಳಿತಿರುವರು,
ಕಟ್ಟೆವಾಲಗಳು ಅವರೆ ಕಟ್ಟೆವಾಲಗಳು! ||೧||


ಶಿಸ್ತು, ಸಮಯಪಾಲನೆಯ ರೂವಾರಿಗಳು.
ಮಧ್ಯಾಹ್ನಕ್ಕೊಂದು ಸ್ಟ್ರಾಂಗ್, ಟೀ, ಬೀಡಿ, ಸಿಗರೇಟ್ ಗಳು.
ಊರ ವಿಮರ್ಶಕರು, ಚಿಂತಕರು, ಏಳ್ಗೈಯ್ಯುವವರು.
ವೇದಿಕೆ ಹಿಂದಿನ ಖ್ಯಾತ ವಾಗ್ಮಿಗಳು ಅವರೆ ಕಟ್ಟೆವಾಲಗಳು. ||೨||


ರಾಜಕೀಯ ವಿಶ್ಲೇಷಣೆಗಳು,
ಊರ ಓಣಿಯ ಸುದ್ದಿಗಳು,
ಯಾವ ಯಾವ ವಾಚಕರಿಗೂ,
ಕಡಿಮೆಯಿರದ ಒಬ್ಬೊಬ್ಬರ ಸ್ಪೀಚುಗಳು,
ಗಂಜಿವಾಲಗಳು ಅವರೆ ಕಟ್ಟೆವಾಲಗಳು ||೩||



ಉದ್ದಾರವಾದವನನ್ನ ಹೊಗಳುವರು,
ಹಳ್ಳ ಹಿಡಿದವನ ನೂಕುವರು,
ಸಮಯಕ್ಕೆ ತಕ್ಕಂತೆ ಬಕೆಟ್ ಹಿಡಿಯುವವರು,
ನೇರ ನುಡಿ, ನೇರ ಮಾತು ಸಹಿಸಿಕೊಳ್ಳದವರು,
ಆದರೆ ಏನೆ ಹೇಳಿ ಇವರೆ ಜೀವನದ ಮಾರ್ಗದರ್ಶಕರು,
ಅವರೆ ಹಳ್ಳಿ ಕಟ್ಟೆವಾಲಗಳು, ಗಂಜಿವಾಲಗಳು, ಬರ್ನಿಂಗ್ ಬ್ರೆಡ್ ಗಳು ||೪||

        - ಬಸವರಾಜ ಉಮಲೂಟಿ (ಯು.ಬಿ)
     ಮೊ:೯೯೧೬೪೦೩೪೧೯
     ಕೆ.ಹಂಚಿನಾಳ
     ಸಿಂಧನೂರು
     ರಾಯಚೂರು.

Tuesday, January 9, 2018

ಭತ್ತದ ಪೈರಿಗೆ ರೈತನ ಕಣ್ಣೀರು

                 ಭತ್ತದ ಪೈರಿಗೆ ರೈತನ ಕಣ್ಣೀರು 
                              (ತುಂಗಭದ್ರಾ ಒಡಲಿನ ರೈತನ ವ್ಯಥೆ)                          
                                      - ಬಸವರಾಜ ಉಮಲೂಟಿ    
                    ರೈತ ದೇಶದ ಬೆನ್ನೆಲುಬು, ರೈತನಿಲ್ಲದೆ ನಾವಿಲ್ಲ ಎಂದು ಬೊಗಳೆ ಬಿಡುತ್ತಾ ತಮ್ಮ ಬಕೆಟ್ ಹಿಡಿಯುತ್ತಿದ್ದಾರೆ ಹೊರತು ರೈತರಿಗೆ ಕಿಂತಿಷ್ಟು ಮಾಡಿಲ್ಲ. ಸದಾ ರೈತರ ಹೆಸರು ಹೇಳಿಕೊಂಡು ರಾಜಕೀಯ ಮಾಡ್ತಾ ಇದ್ದಾರೆ ಹೊರತು ರೈತಪರ, ರೈತ ಕಾಳಜಿಯುಳ್ಳ ಕಾರ್ಯಕ್ರಮಗಳು ಹೊರಬಂದಿಲ್ಲ,ಇನ್ನೂ ಬಜೆಟ್ ಕ್ರಷಿಗೆ ಅಷ್ಟು ಇಷ್ಟ ಅಂತ ಹೇಳಿ ಒಟ್ಟಾರೆ ಕೋಟಿಗಟ್ಟಲೆ ಕೊಡ್ತಾರೆ ಆದರೆ ಅವು ಬರಿ ಪೇಪರ್ ಗಳಿಗೆ ಮಾತ್ರ ಸೀಮೀತವಾಗಿವೆ ಅಪ್ಪಿತಪ್ಪಿ ಒಂದಿಷ್ಟು ದುಡ್ಡು ಬಂದರೂ ಅರ್ಧ ರಾಜಕಾರಣಿಗಳ ಜೇಬಿಗೆ ಇನ್ನರ್ಧ ಅಧಿಕಾರಿಗಳ ಹೆಂಡತಿ ಮಕ್ಕಳಿಗೆ.

                      ಸಾವಿರಾರು ಕೋಟಿ ಸಾಲ ತಗೆದುಕೊಂಡವರಿಗೆ ಮಾಫಿಯಾ ಭಾಗ್ಯ ಸಾವಿರ ರೂಪಾಯಿ ಸಾಲ ತಗೊಂಡ ರೈತನಿಗೆ ಮಾತ್ರ ಸಾವಿನ ಭಾಗ್ಯ ಅಂತಾಗಿದೆ. ಇನ್ನೂ ಈ ರಾಜಕಾರಣಿಗಳ ತೆವಲು ಇಲ್ಲಿಗೆ ಬಿಟ್ಟೀತೆ ರೈತನ ಸಾವಿನಲ್ಲೂ ತಮ್ಮ ವೋಟ್ ಬ್ಯಾಂಕ್ ಸಲುವಾಗಿ ವೋಟ್ ಬ್ಯಾಂಕ್ ರಾಜಕಾರಣ.ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡೋದು ಹೇಳಿದ್ ಕೆಲಸ ಮಾಡದೆ ವಚನಭ್ರಷ್ಟ ರಾಗಿ ರೈತರ ಸಾವಿಗೆ ಕಾರಣರಾಗೋದು.ನಿಜವಾಗ್ಲು  ರೈತನಿಗೆ ಯಾವುದೆ ರೀತಿಯ ಸಾಲ ಮನ್ನಾದ ಅವಶ್ಯಕತೆನೆ ಇಲ್ಲ, ರೈತನಿಗೆ ಸೂಕ್ತ ಸಮಯಕ್ಕೆ ಸರಿಯಾದ ಮಟ್ಟದಲ್ಲಿ ನೀರು, ಧಾನ್ಯಕ್ಕೆ ತಕ್ಕ ಬೆಂಬಲ ಬೆಲೆ ಕೊಟ್ಟರೆ ರೈತರೆ ಸರ್ಕಾರಕ್ಕೆ ಸಾಲ ಕೊಡುವಂತರಾಗುತ್ತಾರೆ.
               ಇನ್ನೂ ನೀರು ಎಂದ ತಕ್ಷಣ ನೆನಪಾಯಿತು ನಮ್ಮ ರಾಜ್ಯದ ರೈತರಿಗೆ ನೀರಿನಲ್ಲಿ ಅನೇಕ ತರಹದ ವಂಚನೆ ನಡೀತಾನೆ ಬಂದಿದೆ ಕಾವೇರಿ ಹೆಸರಲ್ಲಿ ತಮಿಳುನಾಡಿನಿಂದ ಮೋಸ, ಮಹಾದಾಯಿ ಎನ್ನೋ ತಾಯಿಯ ಮಕ್ಕಳಿಗೆ(ರೈತರಿಗೆ) ಗೋವಾ, ಮಹಾರಾಷ್ಟ್ರ ದಿಂದ ವಂಚನೆ
ನಡೀತಾನೆ ಇದೆ ನಮ್ಮ ರೈತರ ಮೇಲೆ.
                     ಇನ್ನೂ ಇವು ಬೇರೆ ರಾಜ್ಯದಿಂದ ವಂಚನೆ ಆದರೆ ನಮ್ಮ ರಾಜ್ಯದಲ್ಲಿ ನಮ್ಮವರಿಂದ ನಮ್ಮ ರೈತರಿಗೆ ಮೋಸ ನಡೀತಿದೆ. ಇದಕ್ಕೆ ಸೂಕ್ತ ಉದಾಹರಣೆ ಅಂದರೆ ತುಂಗಭದ್ರಾ ಒಡಲಿನ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆಗೆ ನೀರು ನೀಡದೆ ಮಾಡುತ್ತಿರುವ ಅನ್ಯಾಯ . ಡ್ಯಾಂ ನಲ್ಲಿ 35 ಟಿಎಂಸಿ ಹೂಳು ತುಂಬಿದೆ ಇದನ್ನು ತೆಗೆಯಲು  ಯಾವುದೆ ಸರ್ಕಾರ ಕೂಡ ಮುಂದೆ ಬರ್ತಾ ಇಲ್ಲ. ಈ ಹೂಳು ತೆಗದರೆ ರೈತರು ನಿಶ್ಚಿಂತೆಯಿಂದ ವರ್ಷಕ್ಕೆ ಎರಡು ಫಸಲನ್ನ ತೆಗೆದುಕೊಳ್ಳಬಹುದು. ಈ ಭಾಗದ ರೈತರಿಗೆ ಈ ಒಂದು ಸಮಸ್ಯೆ ಆದರೆ ಇನ್ನೊಂದು ಭೀಕರ ಸಮಸ್ಯೆ ಕಾಡುತಿದೆ. ಅದೇನಂದರೆ ರಾಜಕೀಯದವರ ಆಟದಿಂದ ಬೇಕಾದ ಕಾರ್ಖಾನೆಗಳಿಗೆ ಸದ್ದಿಲ್ಲದೆ ಸರಾಗವಾಗಿ ಸಾಗುತಿದೆ ತುಂಗೆಯ ಒಡಲು. ಹೊಸಪೇಟೆ ಸುತ್ತ ಮುತ್ತಲಿನ ಫ್ಯಾಕ್ಟರಿ ಗಳಿಗೆ ತುಂಗೆ ಸೋರಿ ಹೋಗುತಾ ಇದ್ದಾಳೆ ಈಕಡೆ ರಾಜಕಾರಣಿಗಳ ಜೇಬು ತುಂಬುತ್ತಿದೆ.
                   ಒಟ್ಟಾರೆ ರಾಜಕೀಯದವರ ಡೊಂಬರಾಟದಿಂದ ರೈತರಿಗೆ ಸೂಕ್ತವಾಗಿ ಸರಿಯಾದ ಕ್ರಮದಲ್ಲಿ ನೀರು ಸಿಗದೆ ವರ್ಷಕ್ಕೆ ಒಂದೂ ಬೆಳೆಯನ್ನ ಬೆಳೆಯಲಿಕ್ಕೆ ಕ್ಲಿಷ್ಟಕರವಾಗಿದೆ. ಈ ವರ್ಷ ಮೊದಲನೆ ಬೆಳೆಗೆ  ನೀರಿದ್ದರು ಬಿಡದೆ ಸತಾಯಿಸಿ ಒಂದು ತಿಂಗಳ ತಡವಾಗಿ ನೀರು ಕೊಟ್ಟು ರೈತರನ್ನ ಗೊಂದಲಕ್ಕೆ ನೂಕಿದ್ದರು.ಎರಡನೇ ಬೆಳೆಗೆ ರೈತ ಸಸಿಮಡಿ ಹಾಕಿ ಪೂರ್ವಸಿದ್ಧತೆ ಮಾಡಿಕೊಂಡು ಕೂತಾಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೆ ಕೇವಲ 60 ದಿನ ಆನ್ ಆ್ಯಂಡ್ ಅಫ್ ಸಿಸ್ಟಮ್ ಮೂಲಕ ಕಾಲುವೆಗೆ ನೀರು ಹರಿಸುವುದಾಗಿ ಹೇಳಿ ಅಡ್ಡಗೋಡೆ ಮೇಲೆ ದೀಪ ಇಟ್ಟು ರೈತ ಬೆಳೆ ಬೆಳೆಯಲೊ ಬೇಡವೊ 60 ದಿನದಲ್ಲಿ ಬೆಳೆ ಕೈಗೆ ಸಿಗುವುದೆ? ಎನ್ನುವ ಕನ್ಫ್ಯೂಸಿಂಗ್ ನಲ್ಲಿ  ರೈತ ಚಿಂತಿಸುತ್ತಿದ್ದಾನೆ. ಆದರೂ ನಮ್ಮ ಭಾಗದ ರೈತರು ಗಟ್ಟಿ ಗುಂಡಿಗೆಯಿಂದ ನಾಟಿ ಮಾಡುತ್ತಾ ಇದ್ದಾರೆ, ಈ ರಾಜಕಾರಣಿಗಳು ಮೋಸ ಮಾಡಬಹುದು ಆದರೆ ಭೂಮಿ ತಾಯಿ ಮೂರಪ್ಪತ್ತಿನ ಊಟಕ್ಕೆ ಮೋಸ ಮಾಡಲಾರಳು ಎಂದು ಭೂಮಿ ತಾಯಿ ನೆನೆಯುತ್ತಾ ಕ್ರಷಿ ಕಾರ್ಯದಲ್ಲಿ ತೊಡಗಿದ್ದಾರೆ ನಮ್ಮ ರೈತಾಪಿ ವರ್ಗ. 
                        ~;ಜೈಹೋ ರೈತ;~