Tuesday, May 28, 2019

ಯೋಚನೆ ಬದಲಿಸಿ, ಸರ್ಕಾರಿ ಶಾಲೆ ಉಳಿಸಿ.

ಯೋಚನೆ ಬದಲಿಸಿ,ಸರ್ಕಾರಿ ಶಾಲೆ ಉಳಿಸಿ. 

                                  - ಯು ಬಸವರಾಜ ಕೆ.ಹಂಚಿನಾಳ 



                  ಇನ್ನೇನು ಬೇಸಿಗೆ ಮುಗೀತಾ ಬಂತು, ಅಬ್ಬರದ ಬಿಸಿಲನಲ್ಲಿ ಜನ ಜೀವನ ಕಳೆದದ್ದು ಆಯ್ತು. ಶೈಕ್ಷಣಿಕ ವರ್ಷ ಶುರುವಾಗುವ ಸಮಯವು ಬಂದೆ ಬಿಟ್ಟಿತು.ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಪೋಷಕರಲ್ಲಿ ಮೂಡುವ ಒಂದೇ ಒಂದು ಯಕ್ಷ ಪ್ರಶ್ನೆ ಅಂದರೆ ಅದು "ನಮ್ಮ ಮಕ್ಕಳನ್ನ ಈ ಬಾರಿ ಯಾವ ಶಾಲೆಗೆ ಸೇರಿಸೋಣ?" 

ಹೌದು, ಸಾಮಾನ್ಯವಾಗಿ ಈ ಪ್ರಶ್ನೆ ಉದ್ಭವ ಹಾಗೆ ಆಗುತ್ತೆ. ಆದರೆ ಇಂತಹ ಸಮಯದಲ್ಲಿ ನಮ್ಮ ಜನರ ಮುಂದೆ ಕಾಣುವುದು ಖಾಸಗಿ (ಕಾನ್ವೆಂಟ್,ಪಬ್ಲಿಕ್) ಶಾಲೆಗಳು ಮಾತ್ರ, ಸರ್ಕಾರಿ ಶಾಲೆಗಳು ಕನ್ನಡ ಶಾಲೆಗಳು ಇವರಿಗೆ ನೆನಪೆ ಆಗುವುದಿಲ್ಲ. ಏಕೆಂದರೆ ಸರಕಾರ ಮೇಲೆ ನಂಬಿಕೆ ಇಡಿ. ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದು ಸಾಲು ಸಾಲು ಭಾಷಣ ಕೊಟ್ಟು ಹೊರಡುವ ಬಹುತೇಕರು ತಮ್ಮ ಮಕ್ಕಳನ್ನು ಮಾತ್ರ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸುತ್ತಿರುತ್ತಾರೆ ಎನ್ನುವುದು ಬಹುತೇಕರ ವಿಚಾರದಲ್ಲಿ ಖಂಡಿತವಾಗಿರುತ್ತದೆ.ಅದೂ ಅಲ್ಲದೇ ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ ನೀಡುವುದಿಲ್ಲ. ಹಾಗಾಗಿ ಕಷ್ಟವೋ ಸುಖವೋ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂದು ಪ್ರತಿ ಪೋಷಕರೂ ಆಸೆ ಪಡುವುದು ಇಂದು ಸಾಮಾನ್ಯವಾಗಿಬಿಟ್ಟಿದೆ.

ಇಂತಹ ಆಸೆ ಪಡುವದರಲ್ಲಿ ಪೋಷಕರದ್ದೇನು ತಪ್ಪಿಲ್ಲ ನಮ್ಮ ಸರ್ಕಾರಗಳ ಕನ್ನಡ ಶಾಲೆಗಳ ನಿರ್ಲಕ್ಷ್ಯ ಧೋರಣೆ, ಕನ್ನಡ ಭಾಷೆ ಮೇಲೆ ನಡೆಯುತ್ತಿರುವ ಧೋರಣೆ ಜನರ ಅನ್ಯಭಾಷೆ ವ್ಯಾಮೋಹ ಇಮ್ಮಡಿಗೊಳಿಸುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತು ಅಲ್ಲಿನ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಎಷ್ಟೋ ಯೋಜನೆಗಳನ್ನ ಕೊಟ್ಟರೂ ಅವು ಪೂರ್ಣರೂಪದ ಕಾರ್ಯಕ್ಕೆ ಬರದೆ ಇರುವುದು ಸಹ ವಿಷಾಧಕರ ಸಂಗತಿ. 

ಏನೇ ಇರಲಿ "ಜನ ಮರಳೋ ಜಾತ್ರೆ ಮರಳೋ" ಅನ್ನೋ ಹಾಗೆ ಯಾರೋ ಊರ ಸಾಹುಕಾರ, ಶ್ರೀಮಂತ ಲಕ್ಷ ಲಕ್ಷ ಕೊಟ್ಟು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದರೆ, ಜನ ಪ್ರತಿಷ್ಠೆಗೋ, ಗುಣಮಟ್ಟದ ಶಿಕ್ಷಣ ಸಿಗುತ್ತೋ  ಅನ್ನೋ ಕಾರಣಕ್ಕೋ ಸಾಲ ಮಾಡಿಯಾದ್ರು ಪ್ರವೇಶ ತಗೋತಾರೆ ಇವೆಲ್ಲವೂ ಅವರವರ ಭಾವನೆಗಳಿಗೆ ಬಿಟ್ಟಿದ್ದು. ಸರ್ಕಾರಿ ಶಾಲೆ ಉದ್ಧಾರ ಆಗಿಲ್ಲ ಅನ್ನೋ ಜನ ತಮ್ಮ ಯೋಚನೆಗಳನ್ನೇಕೆ ಬದಲಿಸುತ್ತಿಲ್ಲವೋ ತಿಳಿಯುತ್ತಿಲ್ಲ. 

ಸಾಲ ಮಾಡಿ ಲಕ್ಷಾನುಗಟ್ಟಲೆ ಖರ್ಚು ಮಾಡಿ  ಖಾಸಗಿ ಶಾಲೆಗಳಿಗೆ ಮಕ್ಕಳನ್ನ ಸೇರಿಸುವುದಕ್ಕಿಂತ ತಮ್ಮ ಕೈಲಾದಷ್ಟು ಹಣವನ್ನ ಸರ್ಕಾರಿ ಶಾಲೆಗಳಿಗೆ ನೀಡಿ ಪ್ರವೇಶ ಪಡೆದು ಅದಕ್ಕೆ ತಮ್ಮದೆ ಸಮಿತಿ ರಚಿಸಿ ಆ ಹಣವನ್ನು ಶಾಲೆಗಳ ಅಭಿವೃದ್ಧಿಗೆ, ಶಿಕ್ಷಣದ ಗುಣಮಟ್ಟಕ್ಕೆ ವಿನಿಯೋಗಿಸ ಬಹುದಲ್ಲವೆ.ಸರ್ಕಾರಿ ಶಾಲೆಗಳಲ್ಲಿ ಕಲಿತವರು ಏನೂ ಸಾಧನೆ ಮಾಡಿಲ್ಲವೆ ಏನು? ಎಂತಂತಹ ದೊಡ್ಡ ಹುದ್ದೆ ಮತ್ತು ಅಧಿಕಾರದಲ್ಲಿ ಇರುವವರು ಸರ್ಕಾರಿ ಶಾಲೆಯಲ್ಲಿಯೆ ಓದಿದವರು. ಇಂತಹ ಯೋಚನೆಗಳಿಂದ, ಯೋಜನೆಗಳಿಂದ ಸ್ಮಾರ್ಟ್ ಕ್ಲಾಸ್ ಗಳು, ಡಿಜಿಟಲ್ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ ನಮ್ಮೂರಿನ ಸರ್ಕಾರಿ ಶಾಲೆಗಳಲ್ಲಿಯೇ ನೋಡಬಹುದಲ್ಲವೆ. ನಮ್ಮ ಮಕ್ಕಳು ನಮ್ಮೂರಿನ ಸರ್ಕಾರಿ ಶಾಲೆಗಳಲ್ಲಿಯೆ ಗುಣಮಟ್ಟದ ಶಿಕ್ಷಣ ಪಡೆಯಬಹುದಲ್ಲವೆ? ನಿಮ್ಮ ಇಂತಹ ಒಂದು ಯೋಚನೆ ಶಿಕ್ಷಣ ಕ್ರಾಂತಿಯನ್ನೆ ಹುಟ್ಟುಹಾಕುತ್ತದೆ ಅಂದರೆ ನಿಮ್ಮ ಯೋಚನೆಗಳನ್ನ ಈಕಡೆ ವಾಲಿಸಬಹುದು ತಾನೆ,ಮತ್ತೇಕೆ ತಡ ಯೋಚನೆ ಬದಲಿಸಿ. ಶಿಕ್ಷಣದ ಹೊಸ ಕ್ರಾಂತಿ ನಮ್ಮಿಂದಲೆ ಶುರುವಾಗಲಿ. 
#ಸರ್ಕಾರಿ_ಶಾಲೆ_ಉಳಿಸಿ
#ಕನ್ನಡ_ಬೆಳಸಿ